ಬೆಂಟೊನೈಟ್	-	ಜೇಡಿಮಣ್ಣಿನ ರೂಪ ತಳೆದ, ಸಾಮಾನ್ಯ ಮೆತು ಜೇಡಿಗಳಿಗಿಂತ ಹೆಚ್ಚು ಶಕ್ತವಾದ ರಾಸಾಯನಿಕ. ಅಧಿಶೋಷಣೆಯಲ್ಲಿ (ಅಡ್ಸಾಪ್ರ್ಷನ್) ಇದು ಅನೇಕ ಜೇಡಿಗಳನ್ನು ಮೀರಿಸುತ್ತದೆ. ಇದರ ಮೂಲ ದ್ರವವಿನಿಮಯ ಗುಣ (ಬೇಸಿಕ್ ಲಿಕ್ವಿಡ್ ಎಕ್ಸ್‍ಚೇಂಜ್ ಕ್ವಾಲಿಟಿ) ಕಯೊಲಿನ್ ಜೇಡಿಗಳ ಗ್ರಾಹಕ ಶಕ್ತಿಯನ್ನೂ ಮೀರಿಸಿದೆ. ಹಲವು ಬೆಂಟೊನೈಟುಗಳಲ್ಲಿ ದ್ರವವಿಲೀನೀಕರಣವಾದ ಬಳಿಕ ಮೆತುಪಾಕ ರೂಪಗೊಳ್ಳುತ್ತದೆ. ಬೆಂಟೊನೈಟುಗಳ ರಚನೆಗೆ ಕಾಚರೂಪದ ಘನಾಶ್ಮಗಳ ಮೇಲಾಗುವ ನಿರ್ಕಾಚ ಪ್ರತಿಕ್ರಿಯೆಗಳೇ ಕಾರಣ. ಇವುಗಳ ರೂಪಣೆಗೆ ಕಾರಣವಾದ ಮಾಂಟ್ಮೊರಿಲೊನೈಟ್ ಖನಿಜಯುಕ್ತವಾದ ಮೂಲ ಕಾಚಘನಾಶ್ಮ ತನ್ನ ಕ್ರೋಡೀಕರಣ ರಚನಾವಿನ್ಯಾಸ ಉಳಿಸಿಕೊಂಡಿರುತ್ತದೆ. ಇವುಗಳಿಂದ ರೂಪಿತವಾದ ಬೆಂಟೊನೈಟುಗಳಿಗೆ ದ್ರವವಿಲೀನೀಕರಣವಾಗಿ ಅವು ಮೆತುಪಾಕವಾಗಬಹುದು. ಇಲ್ಲವೇ ಕಣಕಣಗಳಾಗಿ ಮುದ್ದೆಗಟ್ಟಬಹುದು. 

	ಬೆಂಟೊನೈಟ್ ಸ್ಫಟಿಕಾತ್ಮವೂ ಜೇಡಿರೂಪವುಳ್ಳದ್ದೂ ಆದ ಖನಿಜಗಳನ್ನು ಪಡೆದಿರುತ್ತದೆ. ಇವುಗಳ ಪೈಕಿ ಮಾಂಟೋರಿಲೊನೈಟ್ ಖನಿಜಗಳೇ [(Mgcao)]  ಪ್ರಧಾನ.  

	ಅಗ್ನಿಜನಿತ ಅಂದರೆ ಜ್ವಾಲಾಮುಖಿಜನಿತ ಭಸ್ಮದ ಸಾಗಣೆಯಾಗಿ ಅದು ಒಂದೆಡೆ ನೆಲೆ ನಿಂತು ಸ್ತರಗಳಾಗಿ ರೂಪುಗೊಂಡ ಜೇಡಿಯನ್ನು ಬೆಂಟೊನೈಟ್ ಎಂದು ವಿವರಿಸಲಾಗಿದೆ. ಸ್ವಾಭಾವಿಕವಾಗಿ ಎಲ್ಲ ಬೆಂಟೊನೈಟುಗಳಲ್ಲೂ ಇತರ ಖನಿಜ ತುಣುಕುಗಳು ಸೇರಿರುತ್ತವೆ: ಫೆಲ್ಡ್‍ಸ್ಟಾರ್, ಕ್ವಾಟ್ರ್ಜ್, ಕ್ಯಾಲ್ಸಿಯಮ್ ಕಾರ್ಬೊನೇಟ್ ಇತ್ಯಾದಿ. ಬೆಂಟೊನೈಟುಗಳು ನಾನಾ ವರ್ಣ ತಳೆದಿರುತ್ತವೆ. ಒಣಗಿದಾಗ ಲಘು ಹಳದಿ ಇಲ್ಲವೇ ತಿಳಿಹಸಿರು. ಸಾಪೇಕ್ಷ ಸಾಂದ್ರತೆ 2.4 ರಿಂದ 2.8. ನೀರಿನಲ್ಲಿ ವಿಕ್ಷೇಪವಾದಾಗ ಬೆಂಟೊನೈಟ್ ಸೂಕ್ಷ್ಮ ಕಣಗಳಾಗಿ ಒಡೆಯುತ್ತದೆ. 

	ವಾಣಿಜ್ಯ ದೃಷ್ಟಿಯಿಂದ ಬೆಂಟೊನೈಟುಗಳನ್ನು ಬಗೆಯಾಗಿ ವಿಂಗಡಿಸಬಹುದು. 1. ದ್ರವ ವಿಲೀನೀಕರಣದಿಂದ ಉಬ್ಬುವ ವರ್ಗ (ಥಿಕ್ಸಾಟ್ರಾಪಿಕ್ ಗ್ರೂಪ್). ಇದು ಜಲವಿಕ್ಷೇಪ ಮಾಡಿಕೊಂಡು ಅದರಲ್ಲಿ ನಿಲಂಬಿತವಾಗಿರುವುದು. 2. ಒದ್ದೆಯಾದಾಗ ಉಬ್ಬದಿರುವ ಬೆಂಟೊನೈಟ್. ಇದು ಜಲವಿಕ್ಷೇಪ ಮಾಡಲಾರದು ಮತ್ತು ಅದರಲ್ಲಿ ನಿಲಂಬಿತವಾಗದೆ ಉಳಿಯುವುದು. 

	ಬೆಂಟೊನೈಟ್ ಭೂಮಿಯ ಮೇಲ್ಮೈಯಲ್ಲಿ ದೊರೆಯುತ್ತದೆ. ತೆರಪು ಗಣಿಯಿಂದ ಇದನ್ನು ಹೊರತೆಗೆಯಬಹುದು. ಕೆಲವೊಮ್ಮೆ 5 ಅಥವಾ 6 ಮೀಟರುಗಳಷ್ಟು ಶಿಲಾಸ್ತರಗಳನ್ನು ತೋಡಬೇಕಾಗಬಹುದು. ಮೇದಸ್ಸು ಮತ್ತು ತೈಲ ಪರಿಷ್ಕರಣ ಕ್ರಿಯೆಯಲ್ಲಿಯೂ ಪೆಟ್ರೋಲಿಯಮ್ ಮತ್ತು ಸಸ್ಯ ತೈಲಗಳ ಪರಿಶೋಧನೆಯಲ್ಲಯೂ ಇದರ ಉಪಯೋಗ ಉಂಟು. ಹಲವು ಬಗೆಯ ಸಾಬೂನುಗಳಲ್ಲಿ ಶೇಕಡಾ 25 ಪ್ರಮಾಣ ಬೆಂಟೊನೈಟ್ ಇರುತ್ತದೆ. ಬೇಸಾಯದಲ್ಲಿ ಕೀಟ ನಿರೋಧಕಗಳಿಗೆ ಇದನ್ನು ಸೇರಿಸಲಾಗುತ್ತದೆ.   
(ಐ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ